ಆಡುಸೋಗೆ
ಅಕ್ಯಾಂಥೇಸಿ ಗುಂಪಿಗೆ ಸೇರಿದ ಸಸ್ಯ. ಹಲವಾರು ಕವಲುಗಳು ಮತ್ತು ಗಿಣ್ಣಿನ ಭಾಗದಲ್ಲಿ ಅಭಿಮುಖವಾದ ಎಲೆಗಳನ್ನು ಹೊಂದಿರುವ ಈ ಗಿಡ ಪೊದೆಯಂತೆ ಕಾಣುತ್ತದೆ. ಇದರ ಎಲೆಗಳು ನೀಳ; ಮೇಲ್ತುದಿ ಮತ್ತು ಕೆಳ ತುದಿಗಳು ಚೂಪು; ಅತ್ಯಂತ ಸೂಕ್ಷ್ಮ ರೋಮಗಳಿಂದ ಆವೃತವಾಗಿವೆ. ಬಿಳಿಯ ಬಣ್ಣದ ತೊಟ್ಟಿಲ್ಲದ ಇದರ ಹೂಗಳು ಹೂಗೊಂಚಲಲ್ಲಿ ಒತ್ತಾಗಿ ಜೋಡಣೆಗೊಂಡಿದ್ದು ಬ್ರ್ಯಾಕ್ಟ್ಸ್ ಮತ್ತು ಬ್ರ್ಯಾಕ್ಟಿಯೋಲ್‍ಗಳನ್ನು ಹೊಂದಿರುತ್ತವೆ. ಹೂದಳಗಳು ಕೆಳಭಾಗದಲ್ಲಿ ಕೂಡಿಕೊಂಡಿವೆ; ಮೇಲ್ಭಾಗದಲ್ಲಿ ಇಬ್ಭಾಗವಾಗಿ ಎರಡು ತುಟಿಗಳಂತಿವೆ. ಮೇಲ್ತುಟಿಯಲ್ಲಿ ಎರಡು ದಳಗಳೂ ಕೆಳತುಟಿಯಲ್ಲಿ ಮೂರು ದಳಗಳೂ ಇವೆ. ಪುಷ್ಪದಳಗಳಿಗೆ ಸೇರಿದಂತೆ ಎರಡು ಕೇಸರಗಳಿವೆ. ಅಂಡಾಶಯದಲ್ಲಿ ಕೆಲವೇ ಅಂಡಕಗಳಿವೆ. ಶಲಾಕೆ ಉದ್ದವಾಗಿದ್ದು ಶಲಾಕಾಗ್ರದಲ್ಲಿ ಕೊನೆಗೊಳ್ಳುವುದು. ಆಡುಸೋಗೆ ನಮ್ಮ ದೇಶದಲ್ಲಿ ಸಾಮಾನ್ಯವಾದ ಸಸ್ಯ; ಹಿಮಾಲಯದ ತಪ್ಪಲಿನಲ್ಲಿ ಅಧಿಕವಾಗಿ ಬೆಳೆಯುತ್ತದೆ.

ಈ ಗಿಡದ ಬೇರು, ಕಾಂಡ, ಎಲೆ, ಹೂ ಮತ್ತು ಕಾಯಿಗಳನ್ನು ಔಷಧ ತಯಾರಿಸಲು ಉಪಯೋಗಿಸುವರು. ಇದರ ಬೇರು ಮತ್ತು ಎಲೆಗಳಿಂದ ತಯಾರಿಸಿದ ಕಷಾಯ ನೆಗಡಿ, ಶೀತ, ಕೆಮ್ಮು, ಅಸ್ತಮ ಮತ್ತು ಶ್ವಾಸನಾಳದ ಊತವನ್ನು ಗುಣಪಡಿಸುವುದು. ಅಸ್ತಮವನ್ನು ಕಡಿಮೆ ಮಾಡಲು ಇದರ ಒಣ ಎಲೆಗಳಿಂದ ತಯಾರಿಸಿದ ಚುಟ್ಟ ಮತ್ತು ಸಿಗರೇಟನ್ನು ಸೇದುವರು. ಎಲೆಗಳ ರಸವನ್ನು ಆಮಶಂಕೆ ರಕ್ತಭೇದಿಗಳಿಗೆ ಔಷಧವಾಗಿ ಉಪಯೋಗಿಸುವರು. ಈ ಎಲೆಗಳ ಪೊಲ್ಟೀಸನ್ನು ಮೈ ಕೈ ನೋವು, ಸಂಧಿವಾತ, ಗಾಯಗಳಿಂದಾಗುವ ರಕ್ತಸ್ರಾವ ಮತ್ತು ತಲೆಶೂಲೆ ಖಾಯಿಲೆಗಳಲ್ಲಿ ಲೇಪಿಸುತ್ತಾರೆ. ಎಲೆ, ಬೇರು ಮತ್ತು ಹೂಗಳನ್ನು ಸೇರಿಸಿ ಮಾಡಿದ ಕಹಿಯಾದ ಲೇಪ ಹೊಟ್ಟೆಯಲ್ಲಿರುವ ಜಂತು ಹುಳುಗಳನ್ನು ನಾಶಮಾಡುವುದು. ವ್ಯಾಸೀನ್ ಎಂಬ ಕಹಿಯಾದ ಸಾರಜನಕಯುಕ್ತ ಕ್ಷಾರ ಈ ಸಸ್ಯದಲ್ಲಿ ದೊರೆಯುತ್ತದೆ. ಇದನ್ನು ಚುಚ್ಚುಮದ್ದನ್ನಾಗಿ ಉಪಯೋಗಿಸಿದಾಗ ಹೃದಯದ ಮಾಂಸಖಂಡಗಳ ಚಟುವಟಿಕೆ ಕುಂದಿ ರಕ್ತದ ಒತ್ತಡ ಕಡಿಮೆಯಾಗುವುದು. ಈ ಗಿಡದಲ್ಲಿ ವಿಷವಸ್ತು ಇರುವುದರಿಂದ ಆಡು, ಕುರಿ, ದನ, ಕರುಗಳು ಇದನ್ನು ಮೇಯುವುದಿಲ್ಲ. ಇದರ ಎಲೆಗಳಿಂದ ಉತ್ತಮವಾದ ಹಸಿರು ಗೊಬ್ಬರವಾಗುವುದು. ಬತ್ತದ ಗದ್ದೆಗಳಲ್ಲಿ ಇದನ್ನು ಬೆಳೆಯುವುದರಿಂದ ಜೊಂಡು ಮತ್ತಿತರ ಕಳೆಗಳ ಬೆಳವಣಿಗೆಯನ್ನು ತಡೆಗಟ್ಟಬಹುದು. ಆಡುಸೋಗೆಯ ಎಲೆಗಳಿಂದ ಕ್ರಿಮಿನಾಶಕ ಮತ್ತು ಶಿಲೀಂಧ್ರನಾಶಕಗಳನ್ನು ತಯಾರಿಸುತ್ತಾರೆ. ಎಲೆಗಳಿಂದ ಬರುವ ಹಳದಿ ಬಣ್ಣವನ್ನು ಬಟ್ಟೆ ಮತ್ತು ಚರ್ಮಕ್ಕೆ ಬಣ್ಣ ಹಾಕಲು ಬಳಸುವರು. ಚೆನ್ನಾಗಿ ಬಲಿತ ಬಾಳೆ, ಮಾವು ಮುಂತಾದ ಹಣ್ಣುಗಳನ್ನು ಆಡುಸೋಗೆಯ ಎಲೆಗಳಲ್ಲಿ ಸುತ್ತಿಟ್ಟರೆ ಜಾಗ್ರತೆಯಾಗಿ ಮಾಗಿ ಆಕರ್ಷಕ ಬಣ್ಣವನ್ನು ಪಡೆಯುತ್ತವೆ; ಹೆಚ್ಚುಕಾಲ ಕೆಡದಂತೆ ಇರುತ್ತದೆ.									     
 (ಡಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ